ಕನ್ನಡದ ಪ್ರಸಿದ್ಧ ಕತೆಗಾರ್ತಿ ಲೇಖಕಿ ಸುನಂದಾ ಬೆಳಗಾಂವಕರ ಅವರ ಲಲಿತ ಪ್ರಬಂಧಗಳ ಸಂಗ್ರಹ ‘ಕಜ್ಜಾಯ’. ತಾಯ್ತನದ ಅಕ್ಕರೆಯಿಂದ ಅಂತಃಕಾರಣದಿಂದ ಬರೆಯುವ ಸುನಂದಾರ ಬರಹಗಳು ಸಂಸ್ಕೃತಿಯ ಮೌಲ್ಯಗಳನ್ನು ಕಟ್ಟಿಕೊಡುವಂತಹದ್ದು ಇವರ ಪ್ರಬಂಧಗಳನ್ನು ಕುರಿತು ಕನ್ನಡದ ಪ್ರಸಿದ್ಧ ಕವಿ ಬಿ ಸಿ ರಾಮಚಂದ್ರಶರ್ಮರ ಕೆಲವು ಮಾತುಗಳು ಹೀಗಿವೆ; "ಶ್ರೀಮತಿ ಸುನಂದಾ ಅವರು ಈ ಪ್ರಬಂಧಗಳ ಮೂಲಕ ತಾವು ಕಂಡದ್ದರ ವಿಶಿಷ್ಟತೆಯನ್ನು, ಪೊರೆ ಬೆಳೆದು ಜಡ್ಡಾದ ನಮ್ಮ ಕಣ್ಣಿಗೆ ಹಿಡಿದಿದ್ದಾರೆ. ತಮಗನುಭವವಾದ ನೋವು-ನಲಿವುಗಳನ್ನು ನಮ್ಮದಾಗಿಸಿದ್ದಾರೆ. ಅವರ ಕಣ್ಣು ನೀರೊಡೆದಾಗ ನಮ್ಮ ಕಣ್ಣು ಮಂಜಾಗುವುದು ಅನಿವಾರ್ಯವೆನ್ನುವಂತೆ ಬರೆದಿದ್ದಾರೆ.ಇದೇ ತಾನೇ ಒಳ್ಳೆಯ ಸಾಹಿತ್ಯ ಮಾಡುವ ಕೆಲಸ? ಮಾಡಬೇಕಾದ ಕೆಲಸ?