ಯಶವಂತ ಚಿತ್ತಾಲರ ‘ಶಿಕಾರಿ’ ಕಾದಂಬರಿ ಪ್ರಕಟವಾದ ವರ್ಷ ೧೯೭೯ (ಮನೋಹರ ಗ್ರಂಥಮಾಲಾ, ಧಾರವಾಡ).. ಯಶವಂತ ಚಿತ್ತಾಲರು ಲೇಖಕನ ಕೃತಜ್ಞತೆಗಳನ್ನು ಬರೆಯುವಲ್ಲಿ “ಈ ಕಾದಂಬರಿಯು ನನಗೆ ಅತ್ಯಂತ ಸುಖ ಸಮಾಧಾನ ತಂದ ಕೃತಿ” ಎಂದು ಹೇಳಿಕೊಂಡಿದ್ದಾರೆ. ಓದಿದ ಮೇಲೆ ಅದು ಕನ್ನಡದ ಶ್ರೇಷ್ಠ ಕಾದಂಬರಿಗಳ ಸಾಲಿಗೆ ಸೇರುತ್ತದೆ ಎಂಬ ಭಾವನೆ ನಿಮಗೆ ಬರದಿದ್ದರೆ, ನಿಮಗೆ ಬಹುಶಃ ಸತ್ಯದ ಅಜೀರ್ಣ ಎಂದೂ ಆಗಿಲ್ಲವೆಂದೇ ಹೇಳಬಹುದು. ನಮ್ಮ ಮನಸ್ಸಿನ ಭಯಗಳನ್ನು, ದೌರ್ಬಲ್ಯಗಳನ್ನು ಹತೋಟಿಯಲ್ಲಿಟ್ಟುಕೊಳ್ಳಲು ಎಷ್ಟೆಲ್ಲಾ ರೀತಿಯಲ್ಲಿ ‘ಮರೆಮಾಚುವ’ ಕಲೆಯನ್ನು ನಾವು ಚಿಕ್ಕಂದಿನಿಂದಲೇ ರೂಢಿಸಿಕೊಳ್ಳುತ್ತಾ ಬರುತ್ತೇವಲ್ಲವೇ? ಬೆಳೆಯುತ್ತಾ ಹೋದಂತೆ ಸತ್ಯವನ್ನು ಔಷಧಿಯ ರೂಪದಲ್ಲಿ ಮಾತ್ರ ಬಳಸಿಕೊಳ್ಳಲು ಕಲಿಯುತ್ತೇವೆ. ಒಮ್ಮೆ ಸತ್ಯವನ್ನು ಪಾಯಸವಾಗಿ, ತೊವ್ವೆಯಾಗಿ, ಗೊಜ್ಜಾಗಿ, ಹೋಳಿಗೆಯಾಗಿ, ಅನ್ನವಾಗಿ…ಇನ್ನೂ ಏನೆಲ್ಲಾ ರೂಪದಲ್ಲಿ ಸೇರದಿದ್ದರೂ ಬಾಯಿಗೆ ತುರುಕಿಕೊಂಡರೆ, ಅಥವಾ ಹೊಟ್ಟೆಗೆ ಸುರಿದುಕೊಂಡರೆ ಏನಾಗಬಹುದು? ‘ಶಿಕಾರಿ’ ಕಾದಂಬರಿಯ ಕೇಂದ್ರ ಪಾತ್ರ ನಾಗಪ್ಪ (ಉರುಫ಼್ ಪ್ರೊಫ್. ನಾಗನಾಥ) ಅನುಭವಿಸುವ ಮೈಮನ ನವಿರೇಳಿಸುವ, ಮೃದುವಿರೇಚಕ ಸತ್ಯದ ಪರಿಚಯ (ಅಥವಾ ಶೋಧ) ಓದುಗನ ಮೇಲೂ ಗಾಢವಾದ ಪರಿಣಾಮ ಬೀರುವುದರಲ್ಲಿ ಸಂಶಯವೇ ಇಲ್ಲ.