1991ರಲ್ಲಿ ಪ್ರಕಟವಾದ ’ಕಿರಗೂರಿನ ಗಯ್ಯಾಳಿಗಳು’ ಸಂಕಲನದಲ್ಲಿ 'ಕೃಷ್ಟೇಗೌಡನ ಆನೆ', 'ಮಾಯಾಮೃಗ', ’ರಹಸ್ಯ ವಿಶ್ವ' ಎಂಬ ನಾಲ್ಕು ಕತೆಗಳಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಶ್ರೇಷ್ಠ ಸೃಜನಶೀಲ ಕೃತಿ ಪ್ರಶಸ್ತಿ (1992) ಪಡೆದಿದೆ. ಮೊದಲನೆ ಕತೆಯಾದ 'ಕಿರಗೂರಿನ ಗಯ್ಯಾಳಿಗಳು' ಸ್ತ್ರೀವಾದಿಗಳಿಂದ ತುಂಬ ಪ್ರಶಂಸೆಗೆ ಪಾತ್ರವಾಗಿದೆ. ಹಿಂದಿ, ಇಂಗ್ಲಿಷ್, ಮಲಯಾಳಂ, ಮರಾಠಿ, ಕೊಡವ ಭಾಷೆಗಳಿಗೆ ಅನುವಾದವಾಗಿದೆ. ಎ.ಎನ್.ರಾವ್ ಜಾಧವ್‌ರಿಂದ ನಾಟಕವಾಗಿ ಅನೇಕ ಪ್ರದರ್ಶನ ಕಂಡಿದೆ. ಅದರ ರಂಗಕೃತಿಯೂ ಪುಸ್ತಕವಾಗಿ ಪ್ರಕಟವಾಗಿದೆ (1999), ಸುಮನ ಕಿತ್ತೂರು ಅವರ ನಿರ್ದೇಶನದಲ್ಲಿ ಸಿನೆಮಾ ಕೂಡ ಆಗಿದೆ. 'ಮಾಯಾಮೃಗ' ಕತೆಯು ಆ ಅವಧಿಯಲ್ಲಿ ಪ್ರಕಟವಾದ ರಾಷ್ಟ್ರದ ಅತ್ಯುತ್ತಮ ಹದಿಮೂರು ಕತೆಗಳಲ್ಲಿ ಒಂದೆಂದು ದೆಹಲಿಯ 'ಕಥಾ' ಪ್ರಶಸ್ತಿ ಪಡಿದಿದೆ. ಹಿಂದಿ, ಮರಾಠಿ, ಒರಿಯಾ, ಬಂಗಾಳಿ, ತೆಲಗು, ಇಂಗ್ಲಿಷ್ ಭಾಷೆಗಳಿಗೂ ಅನುವಾದವಾಗಿದೆ. 'ಕೃದ್ದೇಗೌಡನ ಆನೆ' ಇಂಗ್ಲಿಷ್, ಹಿಂದಿ, ಮರಾಠಿ ಭಾಷೆಗಳಿಗೆ ಅನುವಾದಿಸಲ್ಪಟ್ಟಿದೆ. ’ರಹಸ್ಯ ವಿಶ್ವ' ಕಥೆಯಲ್ಲಿ ಚಿಕ್ಕ ಹುಡುಗನೊಬ್ಬ ಸೈಕಲ್ ಕಲಿಯಲು ಹೋಗಿ ಒಬ್ಬಳು ದಡೂತಿ ಹೆಂಗಸಿಗೆ ಢಿಕ್ಕಿ ಹೊಡೆದು ಅವಳ ಸೀರೆ ಸುರುಳಿಯೊಳಗೆ ಸಿಕ್ಕಿಕೊಂಡು ಬಿಡುವುದನ್ನು, ಕುತೂಹಲಿ ಹುಡುಗನೊಬ್ಬ ಆ ಮೂಲಕ ಕಾಣುವ ರಹಸ್ಯ ವಿಶ್ವವನ್ನು ಮಾರ್ಮಿಕವಾಗಿ ಮುಂದಿಡುವ ಕಥೆಯಿದು.