Ondu kolina nisarga bhashe: kanmaneya kategalu ಕಾನ್ಮನೆಯ ಕತೆಗಳು: ಒಂದು ಕೋಲಿನ ನಿಸರ್ಗ ಭಾಷೆ
Material type:
- 9789381441695
- K894.301 SHIO
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library | Kannada | K894.301 SHIO (Browse shelf(Opens below)) | Available | 072371 |
“..ಅರಣ್ಯ ಸಂರಕ್ಷಣೆಯ ಕೆಲಸಗಳು ನಡೆಯುತ್ತಿವೆ. ಸರಣಿ ವಿಚಾರ ಸಂಕಿರಣ, ಆಂದೋಲನ, ಹೋರಾಟಗಳು ಸಾಗಿದೆ. ನೆಲಮೂಲದ ಭಾಷೆಯ ಗಂಧವಿಲ್ಲದೇ ಪರಿಸರ ವಿಜ್ಞಾನವನ್ನು ಪರಿಣಾಮಕಾರಿಯಾಗಿ ಶ್ರೀಸಾಮಾನ್ಯರತ್ತ ಒಯ್ಯಬಹುದೇ? ಪ್ರಶ್ನೆ ಜನಿಸಿದೆ. ಪರಿಸರದ ಮಾತು ಕೇಳಲು ಕುಳಿತ ಶ್ರೀಸಾಮಾನ್ಯರಿಗೆ ಭೂಮಿ ಬಿಸಿಯಾಗುತ್ತಿದೆ, ಹಿಮ ಕರಗುತ್ತಿದೆ, ಓಜೋನ್ ಕವಚ ಹಾಳಾಗುತ್ತಿದೆ, ಸಸ್ಯ ಸಂಕುಲಗಳು ವಿನಾಶವಾಗುತ್ತಿವೆಯೆಂದು ಹೇಳಿದರೆ ಪ್ರಯೋಜನವಿಲ್ಲ. ದಿನ ನಿತ್ಯದ ಬಳಕೆಯಲ್ಲಿರುವ ನಿಸರ್ಗ ಸಂಪನ್ಮೂಲಗಳ ಕತೆಯ ಎಳೆಎಳೆಯನ್ನು ಅವರ ಭಾಷೆಯಲ್ಲಿ ಬಿಡಿಸಿ ತೋರಿಸಬೇಕು. ಕಾನ್ವೆಂಟ್ ಓದಿ, ಕಾಂಕ್ರೀಟ್ನಲ್ಲಿ ಬೆಳೆದು, ವಿಶ್ವ ಪರ್ಯಟನೆಗೆ ವಿಮಾನವೇರಿ ಜಾಗತಿಕ ಸೆಮಿನಾರಿನಲ್ಲಿ ಕಳೆದು ಹೋಗುತ್ತಿರುವ ಈ ತಲೆಮಾರಿನ ಅಕಡೆಮಿಕ್ ಪರಿಸರ ತಜ್ಞತೆಯಿಂದ ಇದನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ. ಪರಿಸರ ಜ್ಞಾನ ಸಂವಹನ ಸಾಧ್ಯವಾಗಲು ನಾವು ವನವಾಸಿಯಾಗಬೇಕು, ಕಾಡುಭಾಷೆ, ಆಡುಭಾಷೆಯಲ್ಲಿ ಮಾತಾಡಬೇಕು. ಕಾನೂನು, ಕೋಲುಗಳಿಗಿಂತ ಇದು ಹೆಚ್ಚು ಪರಿಣಾಮಕಾರಿ. ಒಂದು ಕೋಲಿನ ನಿಸರ್ಗ ಭಾಷೆ ಮೂಲಕ ಇಲ್ಲಿ ಕಾಡಿನ ಕಾಲುದಾರಿ ಕಾಣಿಸುವ ಪುಟ್ಟ ಪ್ರಯತ್ನ ಮಾಡಿದ್ದೇನೆ.
ಬಳಸಿಬಲ್ಲ ಅರಿವಿನಿಂದ ನಿಸರ್ಗ ಜ್ಞಾನ ಶಾಖೆ ನಾಡಿನಲ್ಲಿ ಶ್ರೀಮಂತವಾಗಿ ಎದ್ದು ನಿಂತಿದೆ. ಸಸ್ಯಶಾಸ್ತ್ರೀಯ ಹೆಸರು ಹಿಡಿದ ವಿಜ್ಞಾನಿಗಳ ಕಾಡು ಸುತ್ತಾಟಕ್ಕೆ ಸುಮಾರು ಎರಡು ಶತಮಾನ ತುಂಬಿರಬಹುದು. ಆದರೆ ಮರ, ಬಳ್ಳಿ, ಹಕ್ಕಿ, ಕೀಟಗಳಿಗೆಲ್ಲ ಸ್ಥಳೀಯರ ನಾಮಕರಣ ಯಾವತ್ತೋ ನಡೆದಿದೆ. ಸಾವಿರಾರು ವರ್ಷಗಳಿಂದ ಕಾಡೊಳಗಿನ ಪರಂಪರೆ ವನ ವಿಜ್ಞಾನ ಹುಡುಕಿ ಬೆಟ್ಟದ ದಾರಿಯಲ್ಲಿ ಬಹುದೂರ ಕ್ರಮಿಸಿದೆ. ಸಸ್ಯಗಳ ಔಷಧೀಯ, ಆಹಾರ ಮಹತ್ವ ತಿಳಿಸಿದೆ. ದೇಸಿ ಅರಣ್ಯ ಮಾರ್ಗದ ಮೂಲಕ ನೆರೆಹೊರೆಯ ಕಾಡು ಅರ್ಥಮಾಡಿಕೊಳ್ಳುವುದು ನಮ್ಮ ಪ್ರಥಮ ಕಾಳಜಿಯಾಗಬೇಕು, ಆಗ ಉಳಿಸುವ ಪ್ರೀತಿ ಬೆಳೆಯುತ್ತದೆ. ಆದರೆ ಡಚ್ಚರು ಶ್ರೀಲಂಕಾದಲ್ಲಿ ಕಲಿಸಿದ ನೆಡುತೋಪಿನ ದಾರಿಯಲ್ಲಿ ಅರಣ್ಯಾಭಿವೃದ್ಧಿಯ ನೀತಿ ಹುಡುಕಿದವರು ನಾವು!
ಬ್ರಿಟಿಷ್ ಆಡಳಿತದಲ್ಲಿ ಕಂಡುಕೊಂಡ ತೇಗದ ತೋಟ ಕಟ್ಟುವ ದಾರಿಯಲ್ಲಿ ಓಡಿ ದಣಿದಿದ್ದೇವೆ. ಡೆಹ್ರಾಡೂನಿನ ಪರಿಸರ ಪಾಠ ಶಾಲೆಯಲ್ಲಿ ಅರಣ್ಯ ನಿರ್ವಹಣೆಯ ಜ್ಞಾನ ಅಚ್ಚೊತ್ತುತ್ತಾ ಬೀಜೋಪಚಾರ, ನರ್ಸರಿಗಳ ಮೂಲಕ ಏಕತೆಯ ತೋಪು ಕಟ್ಟುವ ಪಡೆ ಬೆಳೆಸಿದ್ದೇವೆ. ಒಂದೊಂದು ಸಸಿಯ ಜೊತೆ ಮನುಷ್ಯ ಬಳಕೆಯ ಸಂಬಂಧ ಶೋಧಿಸುವ ನಮಗೆ ಕಾಡು ಕಟ್ಟಿದ ಜೀವಲೋಕದ ಕತೆಗಳು ಮರೆತುಹೋಗಿವೆ. ಖಗ, ಮೃಗಗಳು ಅರಣ್ಯ ಕೃಷಿಕರಾಗಿ ಪಾಠ ಕಲಿಸಿವೆ. ಹುಲ್ಲಿನಲ್ಲಿ ಬಲೆನೇಯ್ದ ಜೇಡಗಳೂ ನಿಸರ್ಗ ಸೂಕ್ಷ್ಮತೆಯ ಸೋಜಿಗದ ಮಹಾಕಾವ್ಯ ಬರೆದಿವೆ. ನೆಡುತೋಪಿನ ಸಾಲಿನ ಅಬ್ಬರದ ಧ್ವನಿಗಳಲ್ಲಿ ಕಾಡು ಬೆಳೆಯುವ ಸಹಜ ದಾರಿಗೆ ಕತ್ತಲು ಕವಿದಿದೆ. ಭೂಮಿಗೆ ಕಾಡು ಕಟ್ಟುವ ಪೊದೆ, ಮುಳ್ಳು, ಹುಲ್ಲು, ಬಳ್ಳಿಗಳು ಯಾರಿಗೂ ಬೇಡವಾಗಿವೆ. ಸಾಲು ಮರ ಉತ್ಪಾದನೆಯ ಉಮೇದಿಗೆ ನೆಲಹಂತದ ಜೀವಲೋಕದ ಆವಾಸ ಆಘಾತಕ್ಕೆ ಸಿಲುಕಿದೆ. ಕಾಡು ಕೂಡುವ ಕತೆಗಳು ನೇಪಥ್ಯಕ್ಕೆ ಸರಿದಿವೆ.
ಬಳ್ಳಾರಿಯ ಜಾಲಿ, ಗುಲ್ಬರ್ಗಾ ಚಿಂಚೋಳಿಯ ಗೊಟ್ಟಂಗೊಟ್ಟಿ ಬೆಟ್ಟದ ಪಾಂಡವರ ಪುಂಡಿಪಲ್ಯ, ಕುಷ್ಟಗಿ ಹೊಲದ ಕಳೆ ಜೇಕು, ಶರಾವತಿ ಕಣಿವೆಯ ವಾಟೆಹಳ್ಳದ ಬನಾಟೆ, ಮೇದಿನಿಯ ಹೆನ್ನೇರಲು, ಕಾಳಿ ನದಿಮೂಲದ ಕುಶಾವಳಿಯಲ್ಲಿ ಕಂಡ ಚಕ್ರಾಣಿ, ಜಮಖಂಡಿ ಕಲ್ಲಳ್ಳಿ, ಗೋಕಾಕ್ ಗುಡ್ಡದ ಮುಳ್ಳುಕಂಟಿಗಳೆಲ್ಲ ಮತ್ತೆ ಮತ್ತೆ ನನಗೆ ಏಕೆ ಕಾಡುತ್ತಿವೆ? ಉತ್ತರ ಈಗ ದೊರಕಿದೆ. ಲಮಾಣಿಗರು, ಸಿದ್ದಿಯರು, ಕುಣಬಿ, ಮರಾಠಿಗರು ಹೀಗೆ ನಾಡಿನ ಕಾಡಿನ ಭಾಷೆ ಬಲ್ಲವರ ಪರಿಣಾಮಕಾರಿ ಸಾಲುಗಳು ಎದೆಗೆ ನಾಟಿ ಚಿರನೆನಪಿಗಾಗಿ ಅಂಟಿವೆ.
ಉತ್ತರ ಕನ್ನಡದ ಶಿರಸಿಯ ನನ್ನ ಊರು ಕಳವೆಯಲ್ಲಿ ಕರ್ನಾಟಕ ಅರಣ್ಯ ಇಲಾಖೆ ಹಾಗೂ ಗ್ರಾಮ ಅರಣ್ಯ ಸಮಿತಿ ಕಳವೆಯ ಸಹಯೋಗದಲ್ಲಿ ಕಾನ್ಮನೆ ನಿಸರ್ಗ ಜ್ಞಾನ ಕೇಂದ್ರ ಆರಂಭವಾಗಿದೆ. ದೇಸಿ ಅರಣ್ಯ ಜ್ಞಾನ ಹಂಚುತ್ತಾ ನೆಲ-ಜಲ ಸಂರಕ್ಷಣೆಯ ಸಾಧ್ಯತೆ ಪರಿಚಯಿಸುವುದು ಮುಖ್ಯ ಉದ್ದೇಶವಾಗಿದೆ. ನಾಡಿನ ಮಕ್ಕಳಿಗೆ ಇಲ್ಲಿ ನಿಸರ್ಗ ವಿಸ್ಮಯದ ಅನುಭವ ಹೇಳುವಾಗೆಲ್ಲ ನನಗೆ ಕತೆಗಳು ಕಾಣಿಸಿವೆ. ಮರ ಮಾತಾಡುವುದು ಕೇಳಿಸಿದೆ. ಅರಣ್ಯ ವಿಜ್ಞಾನದ ಕಾರ್ಯಕಾರಣದ ಹುಡುಕಾಟದ ಜೊತೆಗೆ ಕಾಡು ಉಳಿಸಲು, ಬೆಳೆಸಲು ಉಪದೇಶದ ಭಾಷಣಕ್ಕಿಂತ ಮರಗಿಡಗಳನ್ನು ಮಾತಾಡಿಸುವ ಭಾಷೆ ಕಲಿಯಬೇಕಾಗಿದೆ. ಆಯಾಸದ ಮಧ್ಯೆ ಅರಣ್ಯ ಅಲೆಮಾರಿಗಳು ಮುಳ್ಳಿನ ದಾರಿಯ ಕಲ್ಲಿನಲ್ಲಿ ಕುಳಿತು ಹೇಳಿದ ಕಥನಗಳಿವು. ಕಾನ್ಮನೆ ನಿಸರ್ಗ ಜ್ಞಾನ ಕೇಂದ್ರದ ಕಾರ್ಯಕ್ರಮಗಳಲ್ಲಿ ಹಂಚುತ್ತಿದ್ದ ಕಾಡಿನ ಕತೆಗಳು ಇಲ್ಲಿವೆ..”
ಪುಸ್ತಕದಿಂದ ಆಯ್ದ ಬರೆಹಗಳಿವು. ಕಳವೆಯವರು ಅಡಿಕೆ ಪತ್ರಿಕೆಯೂ ಸೇರಿದಂತೆ ಇತರ ಪತ್ರಿಕೆಗಳಿಗೆ ಬರೆದ ಲೇಖನಗಳ ಸಂಕಲನವಿದು.
There are no comments on this title.