Kumaravyasa kathantara: Aranyaparva Virataparva ಕುಮಾರವ್ಯಾಸ ಕಥಾಂತರ: ಅರಣ್ಯಪರ್ವ ವಿರಾಟಪರ್ವ
Material type:
- 23 K894.109 VENK
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library | Kannada | K894.109 VENK (Browse shelf(Opens below)) | Available | 076793 |
Browsing St Aloysius Library shelves, Collection: Kannada Close shelf browser (Hides shelf browser)
`ಕುಮಾರ ವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು, ಭಾರತ ಕಣ್ಣಲಿ ಕುಣಿಯುವುದು' ಎಂದು ಕುವೆಂಪುರವರು ಮನದುಂಬಿ ಕುಮಾರ ವ್ಯಾಸನನ್ನು ಕೊಂಡಾಡಿದ್ದಾರೆ. ಕುಮಾರ ವ್ಯಾಸನ `ಭಾರತ ಕಥಾಮಂಜರಿ' ಎಂಬ ಮಹಾಕಾವ್ಯವನ್ನು ವ್ಯಾಸ ಪ್ರಣೀತ `ಜಯ'ದಿಂದಲೆ ಪ್ರೇರಣೆ ಪಡೆದಿದ್ದರೂ ಅದನ್ನು ಕನ್ನಡ ಸಂಸ್ಕೃತಿಗೆ ಒಗ್ಗಿಸಿದ ಕೀರ್ತಿ ಹೆಗ್ಗಳಿಕೆ ಕುಮಾರವ್ಯಾಸನದು. ಅವನ ಕಾವ್ಯ ಚಮತ್ಕಾರದ ಬಗ್ಗೆ ಅನೇಕ ಕವಿಪುಂಗವರು, ವಿಮರ್ಶಕರು ನಾನಾ ಬಗೆಯ ವ್ಯಾಖ್ಯಾನಗಳ ಮೂಲಕ ತಮ್ಮ ಪಾಂಡಿತ್ಯಪೂರ್ಣ ಬರಹಗಳಲ್ಲಿ ಅಭಿವ್ಯಕ್ತಿಸಿದ್ದಾರೆ. ಆ ಬಗೆಯ ವಿಶ್ಲೇಷಣೆಯಲ್ಲಿ ತೊಡಗಿದವರಲ್ಲಿ ಎಚ್ ಎಸ್ ವಿ ಏನೂ ಮೊದಲಿಗರಲ್ಲ. ಆದರೆ ಈ ಬಗೆಯ ರಸಭರಿತ ಒಳಸುಳಿಗಳನ್ನು ನವಿರಾಗಿ ಕೊಟ್ಟವರಲ್ಲಿ ಎಚ್ ಎಸ್ ವಿ ಯವರು ಅನನ್ಯರು ಎಂದು ನಾನು ಬಗೆಯುತ್ತೇನೆ. ಕುಮಾರವ್ಯಾಸನ ಕಾವ್ಯ ಪ್ರಸಂಗಗಳ ವಿಶ್ಲೇಷಣೆ ಮತ್ತು ಒಳನೋಟಗಳು ನಮಗೆ ಹೊಸಬಗೆಯ ಓದಿನ ಒಳಪ್ರವೇಶವನ್ನು ಈ ಕೃತಿ ಒದಗಿಸುತ್ತದೆ. ಮೂಲ ಸಂಸ್ಕೃತ ಕೃತಿಯಾದರೂ ಅದನ್ನು ಎಷ್ಟರ ಮಟ್ಟಿಗೆ ಕನ್ನಡ ಸಂಸ್ಕೃತಿಗೆ ಕುಮಾರ ವ್ಯಾಸ ಒಗ್ಗಿಸಿಕೊಂಡುಬಿಟ್ಟಿದ್ದಾನೆ ಎನ್ನುವುದರ ಅನಾವರಣವೆ ಈ ಕೃತಿಯ ಹೆಗ್ಗಳಿಕೆಯಾಗಿದೆ.
ವಿಮರ್ಶೆಯಾಗಲಿ ಟಿಪ್ಪಣಿಯಾಗಲಿ ಆಯಾ ಕೃತಿಯ ಸ್ವಾರಸ್ಯವನ್ನು ತೆಗೆದಿಟ್ಟು ಓದುಗನನ್ನು ಆ ದಿಶೆಯತ್ತ ಮೂಲ ಕೃತಿಯನ್ನು ಓದಲು ಪ್ರೇರೇಪಿಸುವ ವ್ಯಾಖ್ಯಾನವಾದರೆ ಅದು ಸಾರ್ಥಕ್ಯವನ್ನು ಪಡೆಯುವುದು. ಈ ದೃಷ್ಟಿಯಿಂದ ಎಚ್ ಎಸ್ ವಿ ಅವರ ಈ ಕುಮಾರ ವ್ಯಾಸ ಭಾರತದ ವ್ಯಾಖ್ಯಾನ ಅಥವಾ ಟಿಪ್ಪಣಿ ಯಶಸ್ಸನ್ನು ಕಂಡಿದೆ ಎಂದೆನಿಸುತ್ತದೆ. ಓದುಗನಿಗೆ ಕುಮಾರವ್ಯಾಸನ ಭಾರತವನ್ನು ಓದಬೇಕೆಂಬ ಮನಸ್ಸಾಗುತ್ತದೆ. ಮತ್ತೆ ಓದುವವರಿಗೆ `ನಡೆಕೋಲು' (ಎಚ್ ಎಸ್ ವಿಯವರು ಹಲವಾರು ಶುದ್ಧ ಕನ್ನಡ ಪದಗಳ ಬಳಕೆಯನ್ನು ಅನುಸಂಧಾನಕ್ಕೊಳಪಡಿಸಿದ್ದಾರೆ. ನಡೆಕೋಲು ಎಂದರೆ ವಾಕಿಂಗ್ ಸ್ಟಿಕ್ ನ ಪರ್ಯಾಯ ಪದ. ಇನ್ನೊಂದು ಶಬ್ದ `ನೀರ್ಬಿಳು' ಇದು ಜಲಪಾತ ಶಬ್ದದ ಕನ್ನಡ ರೂಪ) ಇವರ ಟಿಪ್ಪಣಿಯೊ ಅಥವಾ ವ್ಯಾಖ್ಯಾನವೊ ಆಗಿ ನಮ್ಮನ್ನು ಕೈಹಿಡಿದು ಕುಮಾರ ವ್ಯಾಸನ ಭಾರತದೊಳಗಿನ ಸಂಚಾರವು ಸುಲಭತರವಾಗುವಂತೆ ಮಾಡುವಲ್ಲಿ ದೊಡ್ಡ ಕೊಡುಗೆಯನ್ನು ನೀಡುತ್ತದೆ. ಎಚ್ ಎಸ್ ವಿಯವರು ಕುಮಾರ ವ್ಯಾಸವನ್ನು ಪಾಠಮಾಡುವ ಅತ್ಯುತ್ತಮ ಅಧ್ಯಾಪಕರಂತೆ, ಉಪನ್ಯಾಸಕಾರರಂತೆ ಕಾವ್ಯದ ವಿವಿಧ ಆಯಾಮಗಳ ಸ್ವಾರಸ್ಯವನ್ನು ಸುಲಿದ ಬಾಳೆಯ ಹಣ್ಣಿನಂದದಿ ಸ್ವಾರಸ್ಯಮಯ ಓದನ್ನು ಕೊಡಮಾಡುತ್ತಾರೆ. ಹಲಸಿನ ಹಣ್ಣಿನ ಮುಳ್ಳಮುಳ್ಳಾದ ಸಿಪ್ಪೆಯನ್ನು ಬಗೆದು, ಅದರೊಳಗಿನ ಮೇಣವನ್ನು ಶುದ್ಧೀಕರಿಸಿ, ಹಲಸಿನ ಸಿಹಿಯಾದ ತೊಳೆಗಳನ್ನು ಜೇನುತುಪ್ಪದಲ್ಲಿ ಅದ್ದಿ ನಮ್ಮ ಬಾಯೊಳಗಿಟ್ಟ ಅನುಭವವಾಗುತ್ತದೆ. ಯಾಕೆಂದರೆ ಕುಮಾರ ವ್ಯಾಸನು ಕವಿಯ`ನಿಡುಗಾಲದ ಒಡನಾಡಿ. `ಕನ್ನಡ ಕವಿಗಳಲ್ಲಿ ಒಬ್ಬಾತನನ್ನು ಆರಿಸು ಎಂದು ಯಾರಾದರೂ ಹೇಳಿದರೆ ನಾನು ಕುಮಾರ ವ್ಯಾಸನನ್ನು ಆರಿಸಿಯೇನು' ಎನ್ನುವಷ್ಟರ ಮಟ್ಟಿಗೆ ಈ ಕವಿಯನ್ನು ಹಚ್ಚಿಕೊಂಡವರು, ಮತ್ತ ಅರ್ಥವನ್ನು ಹೆಚ್ಚಿಸಿ ಬಗೆದವರು. ಮೆಚ್ಚಿಕೊಂಡವರು. ಈ `ಕುಮಾರವ್ಯಾಸ ಕಥಾಂತರ'ವೆಂಬ ಅಪರೂಪದ ಒಳನೋಟಗಳುಳ್ಳ ಅನನ್ಯ ಗ್ರಂಥವು `ಅನಂತಮೂರ್ತಿ ಗೌರವ ಮಾಲಿಕೆ'ಯಲ್ಲಿ ಪ್ರಕಟಗೊಳ್ಳುತ್ತಿರುವುದು ತುಂಬ ಅರ್ಥಪೂರ್ಣವಾಗಿದೆ.
ಗ್ರಂಥ ಪ್ರಾರಂಭಗೊಳ್ಳುವುದು ಕುಮಾರ ವ್ಯಾಸನ ಪ್ರಾರ್ಥನಾ ಆರಂಭಿಕ ಪದ್ಯದ ವಿಶ್ಲೇಷಣೆಯಿಂದ. ಈ ಪ್ರಾರ್ಥನಾ ಪದ್ಯವು `ಮುಳುಗಲಿಕ್ಕೆ ತಕ್ಕ ಆಳ ಮಡುವಿನಂತಿದೆ.' ಎನ್ನುತ್ತಾರೆ ಎಚ ಎಸ್ ವಿಯವರು. ಇನ್ನೊಂದು ಸ್ವಾರಸ್ಯಕರ ವಿಷಯವೆಂದರೆ ಕುಮಾರ ವ್ಯಾಸನು ಆ ಕಾಲದ ವಚನ ಸಾಹಿತ್ಯದಿಂದ ಪ್ರಭಾವಿತನಾಗಿದ್ದ ಎನ್ನುತ್ತ ಆ ಮಾತಿಗೆ ಹಲವಾರು ಉದಾಹರಣೆಗಳನ್ನು ಎಚ್ ಎಸ್ ವಿಯವರು ಎತ್ತಿ ತೋರಿದ್ದಾರೆ. ಆ ಮಾತನ್ನು ತಿಳಿದವರು ಅಹುದಹುದೆನ್ನಬೇಕು. ಕುಮಾರ ವ್ಯಾಸನ ಕಾವ್ಯ ರಚನಾ ಕ್ರಮವನ್ನು`ವಚನರಚನಾ ಕ್ರಮ' ಎಂದೇ ವ್ಯಾಖ್ಯಾನಿಸುತ್ತಾರೆ. ವಿಶಿಷ್ಟ ಪದ ಪ್ರಯೋಗಗಳನ್ನು ನಮಗೆ ಗುರುತಿಸಿಕೊಟ್ಟು ಸರಿಯಾದ ಅರ್ಥಗ್ರಹಿಕೆಗೆ ಉಪಯುಕ್ತವಾದ ಅಂಶಗಳು ಈ ವ್ಯಾಖ್ಯಾನದಲ್ಲಿ ಹೇರಳವಾಗಿವೆ. ತಮಗೆ ಕಂಡ ಕುಮಾರ ವ್ಯಾಸನು ಎಲ್ಲರಿಗೂ ಕಾಣಿಸಬಯಸುವ ಕುಮಾರ ವ್ಯಾಸನ ನೆಲೆಯನ್ನು ನಮಗೆ ಮುಟ್ಟಿಸ ಬಯಸುವ ಎಚ್ ಎಸ್ ವಿಯವರ ಗ್ರಂಥ ರಚನೆ ಆ ದಿಶೆಯಲ್ಲಿ ಸಾರ್ಥಕ್ಯ ಕಂಡಿದೆ. ಎಂಥವರು ನನ್ನ ಕಾವ್ಯ ಓದಬಲ್ಲರು ಎಂಬುದಕ್ಕೆ ಕುಮಾರ ವ್ಯಾಸ ಹೇಳುವ ಮಾತಿದು`` ಸರ್ವಜ್ಞರಾದರು ಚಿತ್ತವಧಾರುಹೋ!'ಎಚ್ ಎಸ್ ವಿಯವರ ಇದರ ವಿಶ್ಲೇಷಣೆ ಹೀಗಿದೆ `ಅವಧಾರು ಹೋ!' ಎನ್ನುವ ಉದ್ಗಾರ ಸೂಚಿಯೂ ಇಲ್ಲಿ ಗಮನಿಸಬೇಕಾದ್ದು. ಅವಧಾರು ಹೋ ಎಂಬುದು ಒಂದು ನುಡಿಗಟ್ಟು ಎಂಬುದನ್ನೂ ನಾವು ನೆನೆಯಬೇಕು. ಎಲ್ಲವನ್ನೂ ಬಲ್ಲವರು ಈ ಕಾವ್ಯವನ್ನು ಎಚ್ಚರದಿಂದ ಓದಬೇಕು ಎನ್ನುವುದು ಪರವಿನಯ ಮತ್ತು ಸ್ವ ಅಭಿಮಾನ ಎರಡನ್ನೂ ಒಂದೇ ಉಸುರಲ್ಲಿ ಸೂಚಿಸುವಂತಿದೆ.
ಸರ್ವಜ್ಞರಾದರು ಎಂಬುದು ಕುಮಾರವ್ಯಾಸನ ವಿಶೇಷ ಮಾತಿನ ವರಸೆ. ಸರ್ವಜ್ಞರಾದರು ಎಂದರೆ ಸರ್ವಜ್ಞರಾದವರು ಎಂದು ಅರ್ಥ. ಆದವರು ಎನ್ನುವುದಕ್ಕೆ ಆದರು ಎಂದೇ ಕುಮಾರ ವ್ಯಾಸ ಬಳಸುವುದು.' ಹೀಗೆ ನಿಖರವಾಗಿ ಕುಮಾರ ವ್ಯಾಸನ ಬಗೆ ಬಗೆಯ ವಿಶಿಷ್ಟ ಪದಪ್ರಯೋಗಗಳ ಕುರಿತು ಅತ್ಯಂತ ಸರಳವಾಗಿ ಸ್ವಾರಸ್ಯವನ್ನು ಅನಾವರಣಗೊಳಿಸುತ್ತ ನಮಗೆ ಪಾಠ ಮಾಡುವ ರೀತಿ ಅನನ್ಯ ಬಗೆಯದಾಗಿದೆ. ಹಳಗನ್ನಡ ಅಧ್ಯಯನ ಓದು ಹೆಚ್ಚುಕಡಿಮೆ ನಿಂತು ಹೋದ ಇಂದಿನ ಸಂದರ್ಭದಲ್ಲಿ ಎಚ್ ಎಸ್ ವಿಯವರ ಈ ಗ್ರಂಥ ಮರುಳುಗಾಡಿನ ನೀರಾಸರೆಯಂತಿದೆ.
ಕುಮಾರ ವ್ಯಾಸನ ಕಾವ್ಯ ಸ್ವಾರಸ್ಯವನ್ನು ಬಿಡಿಸಿಡುವಾಗ ಆಧುನಿಕ ಕವಿಗಳಾದ ಅಡಿಗರು, ಪುತಿನ, ಮಾಸ್ತಿ ಮುಂತಾದ ಸಾಹಿತಿಗಳ, ಕವಿಗಳ ಉದಾಹರಣೆಗಳನ್ನೂ ಎಚ್ ಎಸ್ ವಿ ಕೊಡುತ್ತಾರೆ. ಎಚ್ ಎಸ್ ವಿಯವರ ಕುಮಾರ ವ್ಯಾಸನ ಕುರಿತಾದ ವಿಮರ್ಶೆ ಹೀಗಿದೆ`ಆಧುನಿಕರಾದ ನಮಗೆ ಸಂತೋಷ ಉಂಟು ಮಾಡುವಂತೆ ಕುಮಾರ ವ್ಯಾಸನು ವರ್ಣಗಳನ್ನು ಲಕ್ಷಿಸದೆ ಪೃವೃತ್ತಿಗಳನ್ನು ಲಕ್ಷಿಸಿ ಮಾತಾಡತೊಡಗುತ್ತಾನೆ. ಭಿನ್ನ ಸಂಸ್ಕೃತಿಗಳ ನಡುವೆ ನಡೆಯುವ ಹೊಕ್ಕಾಟ ತಿಕ್ಕಾಟಗಳು ವರ್ಣಾಶ್ರಮ ವ್ಯವಸ್ಥೆಯನ್ನು ಕಂಪನಕ್ಕೊಳಗಾಗಿಸಿದ ಕಾಲದಲ್ಲಿ ಕುಮಾರ ವ್ಯಾಸ ಬದುಕಿದ್ದದ್ದು ಎನ್ನುವುದನ್ನು ನಾವು ಮರೆಯುವಂತಿಲ್ಲ. ಹೀಗಾಗಿ ಹಳೆಯ ಕಾವ್ಯವನ್ನು ಓದುವಾಗ ಎಲ್ಲ ಕಾಲಗಳೂ ಕಲಸಿಕೊಂಡುಬಿಡುತ್ತವೆ. ವ್ಯಾಸನ ವರ್ತಮಾನ ಒಂದು; ಕುಮಾರ ವ್ಯಾಸನ ವರ್ತಮಾನವೊಂದು; ಈವತ್ತಿನ ಓದುಗನ ವರ್ತಮಾನ ಒಂದು. ಈ ತ್ರಿಕಾಲ ಚಕ್ರಗಳು ಸಂಧಿಸುವ ಕ್ಷಣದಲ್ಲಿ ಕಾವ್ಯದ ಅರ್ಥಸ್ಫೋಟ ಸಂಭವಿಸುತ್ತ ಇರುತ್ತದೆ. ನಾನು ಮೌಲ್ಯಗಳನ್ನು ಮಂಡಿಸಿದ್ದೇನೆ. ನಿಮ್ಮ ನಿಮ್ಮ ಧರ್ಮಕ್ಕೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನಿಮ್ಮದೇ ಎಂದು ಕುಮಾರ ವ್ಯಾಸ ಈ ಪಂಕ್ತಿಯಲ್ಲಿ ಹೇಳುತ್ತಿರುವಂತಿದೆ.' ಈ ವ್ಯಾಖ್ಯಾನ ಕುಮಾರವ್ಯಾಸನ `ಅರಸುಗಳಿಗಿದು ವೀರ..... ಗುರುವೆನಿಸಲು ರಚಿಸಿದ ಕುಮಾರ ವ್ಯಾಸ ಭಾರತವ.' ಈ ಪದ್ಯದ ಕುರಿತಾಗಿ ಎಚ್ ಎಸ್ ವಿಯವರು ಬರೆದಿದ್ದಾಗಿದೆ. ಕೆಲವೊಮ್ಮೆ ಮೂಲಮಹಾಭಾರತದ ಆಖ್ಯಾಯಿಕೆಗಳನ್ನು ಕುಮಾರ ವ್ಯಾಸನ ಪ್ರಸಂಗ ವಿವರಣೆಯೊಂದಿಗೆ ಹೋಲಿಸಿ ಕವಿಗಳ ಯಥಾವತ್ತಾದ ಮೌಲ್ಯಮಾಪನ ಮಾಡಿದ್ದಾರೆ. ಪಂಪ ಕವಿಯೊಡನೆಯೂ ಹೋಲಿಸಿ ಬಗೆದಿದ್ದಾರೆ. ಉದಾಹರಣೆಗಾಗಿ ದ್ರೌಪದಿಯ ಚೆಲುವಿನ ವರ್ಣನೆಯ ಕುರಿತು ಎಚ್ ಎಸ್ ವಿಯವರು ವ್ಯಾಖ್ಯಾನಿಸುವ ಬಗೆ ಓದಿ:` ದ್ರೌಪದಿಯ ಚೆಲುವು `ವರ್ಣನಾತೀತ'ವೆಂದು ಹೇಳುತ್ತಾನಾದರೂ ಕುಮಾರ ವ್ಯಾಸ ಆಕೆಯ ಚೆಲುವನ್ನು ವರ್ಣಿಸಿಯೇ ಒಂದು ಸೊಗಸಾದ ಪದ್ಯವನ್ನು ಬರೆದಿದ್ದಾನೆ. ಸ್ವಯಂವರ ಮಂಟಪದಲ್ಲಿ ಬರುತ್ತಿರುವ ದ್ರೌಪದಿ ಹೇಗಿದ್ದಾಳೆ ನೋಡಿ:
ಪದ್ಯ 95;
ನಾರಿಯನು | ಸಂಸಾರಸುಖ ಸಾ
ಕಾರಿಯನು | ಜನ ನಯನ ಕಾರಾ
ಗಾರಿಯನು | ಮುನಿಧೈರ್ಯ ಸರ್ವಸ್ವಾಪಹಾರಿಯನು
ಧೀರರಿಗೆ ಮಾರಂಕವನು | ವರ
ಪಾರಿಕಾಂಕ್ಷಿಯ ಚಿತ್ತಚೌರ್ಯ ವಿ
ಹಾರಿಯನು | ದ್ರೌಪದಿಯನಭಿವರ್ಣಿಸುವೊಡಾರೆಂದ ||
ವರ್ಣಿಸುವೊಡಾರು? ಎಂದು ಕುಮಾರ ವ್ಯಾಸನು ಪ್ರಶ್ನಿಸಿದ್ದಾನೆ. ನಾವಾದರೋ ವರ್ಣಿವೊಡೆ ಕುಮಾರ ವ್ಯಾಸನೆಂದೇ ಚಮಾತ್ಕಾರದಿಂದ ಉತ್ತರಿಸಬೇಕಾಗಿದೆ. ಆತನಿಗೆ ಪ್ರಿಯವಾದ, ಭಾಮಿನಿಯ ಒಂದು ರಚನಾಕ್ರಮದಲ್ಲಿ ಪ್ರತಿ ಪ್ರಾಸ ಸ್ಥಾನವೂ ಹೇಗೆ ಹೊಸ ಕಲ್ಪನೆಗೆ ಜಿಗಿವ ಮೀಟುಗಲ್ಲಾಗುತ್ತದೆ ಎಂಬುದನ್ನು ಗಮನಿಸಿರಿ! ಜೊತೆಗೆ ಪ್ರಾಸ್ಥಾನವೇ ಈ ಬಗೆಯ ಭಾಮಿನಿಯನ್ನು ಓದುವ ಕ್ರಮವನ್ನೂ ನಿರ್ದೇಶಿಸುತ್ತದೆ. ಇಂಥಾ ರಚನಕ್ರಮದಲ್ಲಿ ನೂರಾರು ಭಾಮಿನಿ ಪದ್ಯಗಳನ್ನು ಕುಮಾರ ವ್ಯಾಸ ಬರೆದಿದ್ದಾನೆ. ಪ್ರಾಸವೆಂಬುದು ಅವನಿಗೆ ಬಂಧನವಲ್ಲವೇ ಅಲ್ಲ; ನವೀನಕಲ್ಪನಾ ಲಂಘನಸ್ಥಲ! ದ್ರೌಪದಿಯು ಸಂಸಾರ ಸುಖಕಾರಿ!(ಸಾರಮನಂಗ ಜಂಗಮ ಲತಾಲತಾಂಗಿಯರಿಂದಲ್ತೆ ಸಂಸಾರಂ- ಪಂಪನ-ವಿಕ್ರಮಾರ್ಜುನ ವಿಜಯ) ಜನನ ಕಾರಾಗಾರಿ(ಕಾರಾಗಾ-ಕಾರಾಗ್ರಹ-ಎಂಬುದನ್ನು ಹೇಗೆ ಇಲ್ಲಿ ವ್ಯಕ್ತಿಸೂಚಕವಾಗಿ ತಿರುಗಿಸಿದ್ದಾನೆ ನೋಡಿರಿ), ಮುನಿಧೈರ್ಯ ಸರ್ವಸ್ವಾಪಹಾರಿ(ಧೀರರಿಗೆ ಮಾರಂಕವನು-ಇದೊಂದೇ ರಚನೆಯ ಹೊರಗೆ ಉಳಿಯುವ ಪ್ರಯೋಗ), ವರಪಾರಿಕಾಂಕ್ಷಿಯ ಚಿತ್ತ ಚೌರ್ಯ ವಿಹಾರಿ!(ಅರಸುಗಳಿಗಿದು ವೀರ ಎಂಬ ಆರಂಭಿಕ ಪದ್ಯವೇ ಈ ರಚನಾಕ್ರಮವನ್ನು ಅನುಸರಿಸುತ್ತದೆ ಎಂಬುದನ್ನು ನೆನಪಿಸಿಕೊಳ್ಳೋಣ).
ಕೆಲವು ಹೇಳಿಕೆಗಳು ಕಾವ್ಯಸೃಷ್ಟಿಯ ನಿಗೂಢತೆಯನ್ನು ಸಾರುವಂತಹವು. ಉದಾಹರಣೆಗಾಗಿ` ಕಾವ್ಯದ ಅರ್ಥವೂ ಕೇವಲ ಕಾವ್ಯದಲ್ಲಿ ಇರುವುದಿಲ್ಲ. ಕಾವ್ಯ ಮತ್ತು ಓದುಗನ ಕರ್ಷಣದಲ್ಲಿ ಇರುತ್ತದೆ ಎಂಬುದನ್ನು ಮರೆಯಕೂಡದು.' `ನಾವು ಮಹಾಭಾರತವನ್ನು ಕೇಳಿದ ಮೇಲೆ ಗ್ರಹಿಸಬೇಕಾದದ್ದು ಧರ್ಮದ ಸ್ವರೂಪವನ್ನು, ಸೂಕ್ಷಮವನ್ನೂ ತನ್ಮಯನೆಲೆಯಲ್ಲಿ ಶೋಧಿಸಿಕೊಳ್ಳುವುದಾಗಿದೆ. ಇದು ಓದುವ, ಕೇಳುವ ಕ್ರಿಯೆಗಿಂತ ಮುಖ್ಯವಾದ ನಿಧಿಧ್ಯಾಸನದ ಸ್ಥಿತಿಗೆ ಶ್ರೋತೃಗಳನ್ನು ತೊಡಗಿಸುವ ಕವಿಯ ಹುನ್ನಾರವಾಗಿದೆ. ಕುಮಾರ ವ್ಯಾಸನ `ಅಕ್ಷರ'ವು ಧರ್ಮವೆಂಬ ಈ ಚಿರ ಮೌಲ್ಯವನ್ನು ಸೂಚಿಸುತ್ತಿದೆ ಎಂದು ಗ್ರಹಿಸುವುದು ಯುಕ್ತಿ..'
ಕೊನೆಯದಾಗಿ ಎಚ್ ಎಸ್ ವಿ ಹೇಳುವುದು ಇಷ್ಟು:`` ಕನ್ನಡದಲ್ಲಿ ಕುಮಾರವ್ಯಾಸಭಾರತವು ಬೃಹತ್ ಮತ್ತು ಮಹತ್ತೆರಡನ್ನೂ ಒಗ್ಗೂಡಿಸಿಕೊಂಡಿರುವ ಕೆಲವೇ ಅಪರೂಪದ ಕೃತಿಗಳಲ್ಲಿ ಒಂದು. ಆ ಕಾವ್ಯದ ಸಮಗ್ರ ಗ್ರಹಿಕೆ ಕಷ್ಟ ಸಾಧ್ಯವೆಂಬುದನ್ನು ಹೇಳಲೇಬೇಕು. ಆದರೆ ಭಾಷೆಯ ಕೌತುಕವನ್ನು ಗಮನಿಸಿರಿ. ಕಷ್ಟಸಾಧ್ಯವೆಂಬ ಒಮ್ಮಾತಲ್ಲಿ ಕಷ್ಟ ಮತ್ತು ಸಾಧ್ಯ ಎಂಬ ಎರಡೂ ಪರಿಕಲ್ಪನೆಗಳು ಪ್ರಚ್ಛನ್ನವಾಗಿವೆ!'' ಎನ್ನುತ್ತಾರೆ. ಆ ಕಷ್ಟವನ್ನು ಇಲ್ಲಿ ಎಚ ಎಸ್ ವಿಯವರು ಸಾಧ್ಯವಾಗಿಸಿದ್ದಾರೆ. ಈ ಕೃತಿಯನ್ನು ಕನ್ನಡಿಗರೆಲ್ಲ ಕೊಂಡಾಡಬೇಕಾದ ಕೃತಿಯೆಂದು ನನ್ನ ಅನಿಸಿಕೆ. ನಿಜಕ್ಕೂ ಕುಮಾರ ವ್ಯಾಸನನ್ನು ಓದಲು ನನಗೆ ಈ ಗ್ರಂಥ ಪ್ರೇರಣೆ ನೀಡಿದೆ ಎಂದು ಘಂಟಾಘೋಷವಾಗಿ ಒರಲುತ್ತಿದ್ದೇನೆ. ಎಚ್ ಎಸ್ ವಿಯವರ ಓದಿನ ಹರಹು, ಅವರ ಒಳನೋಟಗಳ ಮಾರ್ಮಿಕತೆ ಒಳಸುಳಿಗಳ ಧ್ವನಿಪೂರ್ಣತೆ ಇವೆಲ್ಲವೂ ಈ ಗ್ರಂಥವನ್ನು ಅನನ್ಯವಾಗಿಸಿದೆ.
There are no comments on this title.