Yeradane vesha: katha sankalana: ಎರಡನೇ ವೇಷ: ಕಥಾಸಂಕಲನ

Sampurnananda Balkuru: ಸಂಪೂರ್ಣಾನಂದ ಬಳ್ಕೂರು

Yeradane vesha: katha sankalana: ಎರಡನೇ ವೇಷ: ಕಥಾಸಂಕಲನ - Mangaluru Akrati Ashaya Publications 2021 - ii,136 p. PB 21x14 cm.

"ಎರಡನೇ ವೇಷ " ಕತೆಗಳ ಸಂಕಲನ -
ಉಡುಪಿ ಜಿಲ್ಲೆಯ ಕುಂದಾಪುರದ ಆಸು ಪಾಸಿನ‌ ಊರುಗಳಾದ ವಂಡ್ಸೆ, ಬಾರ್ಕೂರು, ಕೋಣೆ ಇವೆಲ್ಲ ಪ್ರದೇಶಗಳು ಕಾರಂತರ ಕಾದಂಬರಿಯ ಕಥಾನಕದ ಭೌಗೋಲಿಕ ಸ್ಥಳಗಳಿದ್ದಂತೆ ಡಾ ಸಂಪೂರ್ಣಾನಂದ ಬಳ್ಕೂರು ಇವರ ಈ ಅಪೂರ್ವ ಸಣ್ಣ ಕಥೆಗಗಳ ಭೌಗೋಲಿಕ ಪ್ರದೇಶಗಳಾಗಿವೆ. ಅಂತೆಯೆ ಐತಾಳರು, ಸುಬ್ಬಾ ಭಟ್ಟರು ಇಲ್ಲಿ ಕೂಡ ಬರುತ್ತಾರೆ. ಕಾರಂತರು ಪ್ರಾದೇಶಿಕತೆನ್ನು ವಿಶ್ವಪ್ರಜ್ಞೆಯತ್ತ ನೆಗೆವ ಸ್ಯಾಂಡ್ ಪಿಟ್ಟಾಗಿ ಬಳಸಿದರು. ಸೂಕ್ಷ್ನದಿಂದ ಸ್ಥೂಲದ ಕಡೆಗೆ ಚಲಿಸುವ ಮಾನವ ಸಂಬಂಧಗಳ ನಿಗೂಢ ಸಂಕೀರ್ಣ ನಡೆಗಳನ್ನು ಅನಾವರಣಗೊಳಿಸಿದರು. ಬಳಕೂರರ ಕಥೆಗಳಲ್ಲಿ ಅತಿರೇಕ ಜಿಪುಣತನ, ಬಡವರ ಕಷ್ಟಗಳು, ಹೆಂಗಸರ ಕಷ್ಟದ ದುಡಿಮೆ ಇವೆಲ್ಲ ಸಂವೇದನಾಶೀಲವಾಗಿ ಅಭಿವ್ಯಕ್ತಿಗೊಂಡಿವೆ.
ಬಳಕೂರ ಕಾರಂತರ ಪ್ರಾದೇಶಿಕತೆಯನ್ನು ಅವರ ಕಥಾನಕ ಅವುಗಳನ್ನು ಬಳಸಿಕೊಂಡೆ ತೀರಾ ವಿಭಿನ್ನವಾದ ಮನುಷ್ಯ ಲೋಕದ ನಡವಳಿಕೆಗಳನ್ನು ‌ಕೆಲವೊಮ್ಮೆ ಧ್ವನಿಪೂರ್ಣವಾಗಿ, ಕೆಲವೊಮ್ಮೆ ಸಂಕೀರ್ಣವಾಗಿ ಅನಾವರಣಗೊಳಿಸಿದ್ದಾರೆ. ಇಲ್ಲಿ ಒಟ್ಟೂ 16 ಕತೆಗಳಿವೆ. ಹೆಚ್ಚಿನ‌ ಕತೆಗಳು ಮಣ್ಣಿನ ವಾಸನೆಯಿಂದ ಘಮಗುಡುತ್ತವೆ. ಮನುಷ್ಯನೊಳಗಿರುವ ಸಣ್ಣತನ, ಕ್ಷುದ್ರತೆ, ಸ್ವಾರ್ಥ, ಪ್ರೀತಿ ದ್ವೇಷ ಅಸಹಾಯಕತೆ, ಈ ಕತೆಗಳಲ್ಲಿ ಚಿತ್ರಣಗೊಂಡಿವೆ. ಕುಂದಾಪುರ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಇಲ್ಲಿ ಸಮೃದ್ಧವಾಗಿ ಬಳಸಲಾಗಿದೆ. ಕೆಲವು ಪದಗಳು ಈ ಭಾಷೆಯನ್ನು ಅರಿಯದವರಿಗೆ ಗೊಂದಲಾವಾಗಬಹುದು. ಪುಸ್ತಕದ ಕೊನೆಯಲ್ಲಿ ಕುಂದಾಪುರ ಭಾಷೆಯ ಈ ಕಥೆಗಳಲ್ಲಿ ಬರುವ ಪದಗಳ ಅರ್ಥವಿವರಣೆ ಕೊಡುತ್ತಿದ್ದರೆ ಚೆನ್ನಾಗಿತ್ತು. ಪ್ರತಿಯೊಂದು ಕಥೆಗೆ ಒಂದು ಮನುಷ್ಯ ಸಂದರ್ಭದ ಕತೆ ಇದೆ. ಕತೆಗಳು ಓದಲು ಖುಶಿ ನೀಡುವುದು ಮಾತ್ರವಲ್ಲ, ಚಿಂತನೆಗೀಡು ಮಾಡುತ್ತವೆ. ಕೆಲವು ಘಟನೆಗಳು ಮತ್ತು ಪಾತ್ರಗಳು ಬಹು ಹೊತ್ತಿನವರೆಗೆ ಕಾಡುತ್ತವೆ‌.
ಇಲ್ಲಿ ಹೆಣ್ಣು ಸ್ವತಂತ್ರಳು. ಪ್ರೀತಿಸಿದ‌ ಗಂಡಸಿನ ಪ್ರೀತಿಯ ಕುರಿತು ಅನುಮಾನ ಬಂದಾಗ ಸಂಗಾತಿಯನ್ನು ದೂರ ಮಾಡಲೂ ತಯಾರಿರುವವರು. ಹೆಣ್ಣು ತನ್ನನ್ನು ಬಳಕೆಯ ಉಪಯೋಗಿಸುವ ವಸ್ತು ಎಂಬ ಗಂಡಸಿನ ಸ್ವಾರ್ಥ ಬುದ್ಧಿಗೆ ಸೆಡ್ಡು ಹೊಡೆದು ನಿಲ್ಲಬಲ್ಲವಳು. ಗಂಡಸರೂ ಕೂಡ ಹೆಣ್ಣಿನ ಸ್ವಾತಂತ್ರ್ಯಕ್ಕೆ ಇಂಬಾಗಿ ಬೆಂಬಲವಾಗಿರುವ ಪಾತ್ರವೊಂದು ಬರುತ್ತದೆ.
ಯಕ್ಷಗಾನ ಕಲೆಯ ಶ್ರೀಮಂತಿಕೆಯನ್ನು ಬಳ್ಕೂರು ಇವರು ತಮ್ಮ ಕತೆಗಳಾದ "ಎರಡನೆಯ ವೇಷ" ಮತ್ತು "ಪುರುಷ ವೇಷ" ಕತೆಗಳಲ್ಲಿ ಸಂಪೂರ್ಣವಾಗಿ ಮತ್ತು ಸಾಂಕೇತಿಕವಾಗಿ ಬಳಸಿದ್ದಾರೆ. ಪುರುಷ ವೇಷದ ಕತಾನಾಯಕ ನಳದನಯಂತಿ ಪ್ರಸಂಗದಲ್ಲಿ ನಳನ ಪಾತ್ರ ಹಾಕುವ ಯಕ್ಷಗಾನ ಕಲಾವಿದ. ಅವನೂ ನಳನಂತೆ ಬದುಕಿನಲ್ಲಿ ಆಗಿಬಿಡುವುದು ಒಂದು ವಿಶೇಷ.
ಕೆಲವು ಕತೆಗಳು ಶೋಷಣೆಯ ವಿರುದ್ಧ ಬಂಡಾಯದ ಧ್ವನಿಯುಳ್ಳ ಕತೆಗಳೂ ಇವೆ. ಇಲ್ಲಿನ ಕತೆಗಳಲ್ಲಿ "ಪ್ರವಾಹದ ಪರಿಧಿ ಮೀರಿ" ಕತೆ ಅತ್ಯುತ್ಕೃಷ್ಟ ಕತೆಯಾಗಿದೆ. ಇಲ್ಲಿ ಒಕ್ಕಲು ಒನ್ಬ ಧಣಿಗಳ ವಿರುದ್ಧ ಬಂಡಾಯದ ಕತೆ ಅತ್ಯಂತ ಕಲಾತ್ಮಕವಾಗಿ ಮೂಡಿ ಬಂದಿದೆ.ಮೈಕ್ರೋದಿಂದ ಮೆಕ್ರೋದವರೆಗಿನ ಬದುಕಿನ‌‌, ವೇದನೆಗಳು, ಸಂಕೀರ್ಣತೆಗಳು ಇಲ್ಲಿ ಅನಾವರಣಗೊಂಡಿವೆ‌. ವೇಶ್ಯೆಯರ ಸಮಸ್ಯೆಗಳ ಕುರಿತು, ಯಕ್ಷಗಾನ ಮೇಳಗಳ ರಾಜಕೀಯದ ಕುರಿತು, ಕಲಾವಿದರು ಒಂದು ಯಕ್ಷಗಾನ ಮೇಳದಿಂದ ಇನ್ನೊಂದು ಯಕ್ಷಗಾನ ಮೇಳಕ್ಕೆ ಯಜಮಾನರಿಗೆ ಮೋಸ ಮಾಡಿ ಹೋಗುವುದು. ವರ್ತುಲಗಳು ‌ಇದು ಒಬ್ಬ ಅಪರಾಧಿಯ ಮಾನಸಿಕ ತೊಳಲಾಟವನ್ನು ಮನೋದೈಹಿಕ ಕಾಯಿಲೆಗಳ ಕುರಿತಾಗಿ ಹೇಳುತ್ತದೆ. ಅಯಶಸ್ವಿ ಪ್ರೇಮ ಪ್ರಕರಣ, ಮನುಷ್ಯನೊಳಗೆ ಹುದುಗಿರುವ ಕಾಪಟ್ಯ ಮೋಸ ವಂಚನೆ, ಹಗುರಾಗಿ ಹರಿದಾಡುವ ನಾಲಿಗೆ ಮುಂತಾದವುಗಳ ಅನಾವರಣವು ವ್ಯಂಗ್ಯದ ಲೇಪನದಿಂದ ವರ್ಣರಂಜಿತವಾಗಿವೆ‌
ಇದು ಬಳಕೂರರ ಮೊದಲ ಕತಾ ಸಂಕಲನವಾಗಿದ್ದರೂ ಅನುಭವದ ತೀವ್ರತೆ, ಗಾಢತೆ ಮತ್ತು ಆಳ ಈ ಕಥೆಗಳ ಘನತೆಯನ್ನು ‌ಹೆಚ್ಚಿಸಿವೆ. ಶನಿ‌ ಎಂಬ ಕತೆಯಲ್ಲಿ ದೇವಸ್ಥಾನ ನಿರ್ಮಾಣ ದೈವಭಕ್ತಿ ಇವುಗಳ ಹಿಂದಿರುವ ಮೋಸ ಮತ್ತು ಬದುಕುವ ದಾರಿಯಾಗಿ ಮಾಡಿಕೊಂಬ ಒಬ್ಬ ಖೂಳನ ಕತೆ ಒಂದು ಸಾಮಾಜಿಕ ವಿಡಂಬನೆಯ ಕತೆಯಾಗಿದೆ.
ಎಷ್ಟೊ ಕತೆಗಳು ನಮ್ಮ ಸಂವೇದನೆಯನ್ನು ಬಹುಕಾಲ ಕಾಡುತ್ತದೆ. ಇವರು ಸಣ್ಣ ಕತೆಯಲ್ಲಿ ಮಾಡಿದ ಪ್ತಯೋಗವೊಂದಿದೆ.‌ಗಂಗಾ ಪಾದೇಕಲ್ ಅವರ ಕತೆ "ಅರಿವು" ಇದಕ್ಕೆ ಪ್ರತಿಕ್ರಿಯೆಯಾಗಿ ಸೊಗಸಾದ ಒಂದು ಕತೆಯನ್ನು ಕಟ್ಟಿಕೊಟ್ಟಿದ್ದಾರೆ. ಇಲ್ಲಿನ ಕಥೆಗಳು ನಿಜಕ್ಕೂ ಅಧ್ಯಯನ ಮಾಡಲು ಯೋಗ್ಯ ಕತೆಗಳಾಗಿವೆ.ನಿರೂಪಣೆ ತುಂಬ ಆಕರ್ಷಕವಾಗಿದೆ.ಓದಿಸಿಕೊಂಡು ಹೋಗುವ ಶೈಲಿ ಈ ಕಥೆಗಳಿಗಿವೆ.
ಕೆಲವೊಮ್ಮೆ ಕತೆಗಳು ಅನಿರೀಕ್ಷಿತ ಅಂತ್ಯ ಕಂಡು ಕಥೆಯ ಸಂಕೀರ್ಣತೆಗೆ ಪೂರಕವಾಗಿ ಬರುತ್ತವೆ. ಈ ಕಥಾ ಸಂಕಲನ ಬದುಕನ್ನು ಸೂಕ್ಷ್ಮವಾಗಿ ನೋಡಿದ ಕಣ್ಣುಗಳಿಂದ ಕಲಾತ್ಮಕವಾಗಿ ಕಟ್ಟಲಾಗಿವೆ‌. ಪ್ರೊ ವಿವೇಕ ರೈಗಳ ಅಧ್ಯಯನ ಪೂರ್ಣ ಮುನ್ನುಡಿ ಇದೆ. ಓದಲೇಬೇಕಾದ ಕಥಾ ಸಂಕಲನ ಇದು

9789392116230


Kannada Fiction: ಕನ್ನಡ ಸಣ್ಣ ಕಥೆಗಳು
Kannada Literature: ಕನ್ನಡ ಸಾಹಿತ್ಯ

K894.301 / SAMY