Binnapa: Confession ಬಿನ್ನಪ: ಕನ್ಫೆಷನ್

TOLSTOY (Leo) ಲಿಯೊ ಟಾಲ್‍ಸ್ಟಾಯ್

Binnapa: Confession ಬಿನ್ನಪ: ಕನ್ಫೆಷನ್ - Bengaluru Abhinava Prakashana 2017 - 116

ಖ್ಯಾತ ರಷ್ಯನ್ ಲೇಖಕ-ಕತೆಗಾರ ಲಿಯೋ ಟಾಲ್‌ಸ್ಟಾಯ್‌ ಅವರ ಆತ್ಮಕತೆ. ತರ್ಕಕ್ಕೆ ನಿಲುಕದ ಆಚರಣೆಗಳನ್ನು ಕುರುಡಾಗಿ ಹಿಂಬಾಲಿಸಿದ ಅನುಭವವನ್ನು ಟಾಲ್‌ಸ್ಟಾಯ್‌ ವಿವರಿಸಿದ್ದಾರೆ. ಇಂಗ್ಲಿಷಿನ ಕನ್‌ಫೆಷನ್ ಎಂಬುದನ್ನು ಓ.ಎಲ್‌. ನಾಗಭೂಷಣಸ್ವಾಮಿ ಅವರು ’ಬಿನ್ನಪ’ ಎಂದು ಅನುವಾದಿಸಿದ್ದಾರೆ. ಟಾಲ್‌ಸ್ಟಾಯ್ ಬದುಕಿನ ಅಂತರಂಗದ ಕಥೆ ಇಲ್ಲಿದೆ.

ಓಎಲ್‌ಎನ್‌ ಅವರ ಅನುವಾದದ ಮಾದರಿ ಹೀಗಿದೆ-

ಬದುಕು ಸ್ಥಾವರವಾಗಿತ್ತು. ಉಸಿರಾಡುತ್ತಿದ್ದೆ, ಉಣ್ಣುತ್ತಿದ್ದೆ. ಕುಡಿಯುತ್ತಿದ್ದೆ, ಮಲಗುತ್ತಿದ್ದೆ. ಆದರೆ ಬದುಕು ಇರಲಿಲ್ಲ. ಇಂಥ ಆಸೆಯನ್ನು ಪೂರೈಸಿಕೊಂಡರೆ ಮಾತ್ರ ಬದುಕು ಸಾರ್ಥಕ ಅನ್ನುವಂಥ ಆಸೆಗಳು, ಬಯಕೆಗಳು ಇರಲಿಲ್ಲ. ದೇವತೆಯೊಬ್ಬಳು ಪ್ರತ್ಯಕ್ಷಳಾಗಿ ಏನು ನಿನ್ನ ಕೋರಿಕೆ, ಏನು ನಿನ್ನ ಬಯಕೆ ಎಂದು ಕೇಳಿದ್ದರೆ ಪ್ರತಿಯಾಗಿ ನಾನೇನು ಕೇಳಬೇಕೆಂದು ನನಗೆ ಗೊತ್ತಿರಲಿಲ್ಲ. ನಮ್ಮ ವರ್ಗದ ಜನರ ಬದುಕು-ವಿಶ್ವಾಸದ ನಡುವೆ ವಿರೋಧಗಳಿದ್ದವು, ಆದರೆ ದುಡಿವ ಜನರ ಇಡೀ ಬದುಕು ಅವರ ವಿಶ್ವಾಸ ಅವರಿಗೆ ನೀಡಿದ್ದ ಬದುಕಿನ ಅರ್ಥಕ್ಕೆ ಸಂಪೂರ್ಣವಾಗಿ ಹೊಂದಿಕೊಂಡಿತ್ತು. ಬದುಕನ್ನು ಅರ್ಥಮಾಡಿಕೊಳ್ಳುವುದಿದ್ದರೆ ಬದುಕಿನ ಬಂದಳಿಕೆಗಳಾಗಿರುವ ನಮ್ಮ ವರ್ಗದ ಜನರ ಬದುಕನ್ನಲ್ಲ ಸರಳವಾದ ದುಡಿಯುವ ಜನರ ಬದುಕನ್ನು ನೋಡಬೇಕು, ಬದುಕನ್ನು ಕಟ್ಟುವವರು ಅವರೇ. ಮಾತಿನಲ್ಲಿ ಹೇಳಬಹುದಾದರೆ ಅವರು ಕಟ್ಟಿಕೊಂಡ ಬದುಕಿನ ಅರ್ಥ ಹೀಗಿತ್ತು: ಪ್ರತಿಯೊಬ್ಬ ಮನುಷ್ಯನೂ ದೇವರ ಇಚ್ಚೆಯಂತೆ ಈ ಲೋಕಕ್ಕೆ ಬರುತ್ತಾನೆ. ತನ್ನ ಆತ್ಮವನ್ನು ಕಾಪಾಡಿಕೊಳ್ಳುವ ಅಥವಾ ಹಾಳು ಮಾಡಿಕೊಳ್ಳುವ ಅವಕಾಶ ಇರುವಂತೆ ಮನುಷ್ಯನನ್ನು ದೇವರು ನಿರ್ಮಿಸಿದ್ದಾನೆ. ತನ್ನ ಆತ್ಮವನ್ನು ಕಾಪಾಡಿಕೊಳ್ಳುವುದೇ ಮನುಷ್ಯನ ಬದುಕಿನ ಗುರಿ. ಆತ್ಮವನ್ನು ಕಾಪಾಡಿಕೊಳ್ಳುವುದಕ್ಕೆ ಮನುಷ್ಯ 'ದೇವರ ಥರ' ಬದುಕಬೇಕು, ದೇವರ ಥರ ಬದುಕುವುದಕ್ಕೆ ಎಲ್ಲ ಥರದ ಖುಷಿಗಳನ್ನು ಬಿಡಬೇಕು, ದುಡಿಯಬೇಕು, ವಿನಯ ಇರಬೇಕು, ವೇದನೆ ಪಡಬೇಕು, ಕರುಣೆ ಇರಬೇಕು.
“”ನಮ್ಮ ವರ್ಗದವರ ಬದುಕು, ಶ್ರೀಮಂತರು, ಕಲಿತವರ ಬದುಕು ನನಗೆ ಕೇವಲ ಅಸಹ್ಯವಾಗಿ ಮಾತ್ರವಲ್ಲ ಅರ್ಥಹೀನವಾಗಿ ಕಂಡಿತು. ನಮ್ಮ ಎಲ್ಲ ಕ್ರಿಯೆ, ಚರ್ಚೆ, ವಿಜ್ಞಾನ, ಕಲೆಗಳು ನನಗೆ ಹೊಸ ಬೆಳಕಿನಲ್ಲಿ ಕಂಡವು. ಇವೆಲ್ಲ ಕೇವಲ ಆತ್ಮಲೋಲುಪತೆ ಎಂದು ತಿಳಿಯಿತು. ಇವುಗಳಲ್ಲಿ ಅರ್ಥ ಕಾಣುವುದು ಅಸಾಧ್ಯವಾಗಿತ್ತು.

ನನ್ನನ್ನು ಆವರಿಸಿರುವ ಶಕ್ತಿ/ಚೈತನ್ಯವೊಂದಿದೆ ಎಂದು ಒಪ್ಪಿಕೊಂಡ ತಕ್ಷಣ ನಾನು ಬದುಕಬಲ್ಲೆ ಅನ್ನಿಸಿತು. ಆದರೆ ‘ ಈ ಆದಿಕಾರಣ, ಶಕ್ತಿ ಯಾವುದು? ಅದನ್ನು ಕುರಿತು ಹೇಗೆ ಚಿಂತಿಸಲಿ? ನಾನು ದೇವರೆಂದು ಕರೆಯುತ್ತೇನಲ್ಲ ಅದಕ್ಕೂ ನನಗೂ ಯಾವ ಸಂಬಂಧ?’ ಎಂದು ಕೇಳಿಕೊಂಡೆ…..

‘ಮತ್ತೇನು ಹುಡುಕುತ್ತಿದ್ದೀಯೆ? ಇದೇ ಅವನು. ಅವನಿಲ್ಲದೆ ಬದುಕಲು ಆಗದು. ದೇವರನ್ನು ಅರಿಯುವುದೆಂದರೆ ಬದುಕುವುದೆಂದರೆ ಎರಡೂ ಒಂದೇ. ಬದುಕೇ ದೇವರು.’

ಸತ್ಯವನ್ನು ಸಂಪಾದಿಸಲು ವ್ಯಕ್ತಿ ಪ್ರತ್ಯೇಕವಾಗಿರಬಾರದು, ಪ್ರತ್ಯೇಕವಾಗಿರಬಾರದೆಂದರೆ ಪ್ರೀತಿಸಬೇಕು, ತನಗೆ ಒಪ್ಪಿಗೆ ಇರದ ಸಂಗತಿಗಳನ್ನೂ ಸಹಿಸಬೇಕು ಎಂದುಕೊಂಡೆ.

ಪ್ರೀತಿಯ ಐಕ್ಯದಲ್ಲಿ ಸತ್ಯವಿದೆ ಎಂದು ನಂಬುವ ನನಗೆ ಮತಧರ್ಮಶಾಸ್ತ್ರವು ಏನನ್ನು ಸೃಷ್ಟಿಸಬೇಕೋ ಅದನ್ನೇ ನಾಶಮಾಡುತ್ತಿದೆ ಅನ್ನಿಸಿತು.

ಎರಡು ಹೇಳಿಕೆಗಳು ಪರಸ್ಪರ ವಿರುದ್ಧವಾಗಿದ್ದರೆ ಅವುಗಳಲ್ಲಿ ಯಾವುದೊಂದೂ ತಾನೇ ಪರಮಸತ್ಯವೆಂದು ಹೇಳಿಕೊಳ್ಳುವುದಕ್ಕೆ…. ಸಾಧ್ಯವಾಗುವುದಿಲ್ಲ ಎಂಬ ಸರಳವಾದ ಸತ್ಯವನ್ನು ಜನ ಕಾಣುವುದೇ ಇಲ್ಲ.”


Biography

K894.4 TOLK